ಉಪದೇವತೆಗಳು

ನಾಗರಾಜ
ಅಯ್ಯಪ್ಪ ಸ್ವಾಮಿಯ ಶ್ರೀಕೋವಿಲ್ (ಪ್ರಧಾನ ಗರ್ಭಗುಡಿ) ಸವಿೂಪದಲ್ಲಿಯೇ ನಾಗರಾಜನನ್ನು ಪ್ರತಿಷ್ಠಾಪಿಸಲಾಗಿದೆ. ತೀರ್ಥಯಾತ್ರಿಕರು ಅಯ್ಯಪ್ಪ ಸ್ವಾಮಿಯನ್ನೂ ಕನ್ನಿಮೂಲಗಣಪತಿಯನ್ನೂ ದರ್ಶನ ಮಾಡಿದ ಬಳಿಕ ನಾಗರಾಜನಿಗೆ ಪೂಜೆ ಸಲ್ಲಿಸುತ್ತಾರೆ.

ವಾವರು ನಡ
ವಾವರು ಸ್ವಾಮಿ ಎಂಬ ಹೆಸರಿನಿಂದ ಗುರುತಿಸಲ್ಪಡುವ ವಾವರನು ಅಯ್ಯಪ್ಪ ಸ್ವಾಮಿಯ ಭಕ್ತನಾದ ಓರ್ವ ಮುಸ್ಲಿಂ ಸಂತ. ಶಬರಿಮಲೆಯಲ್ಲಿ ಒಂದು ದೇವಾಲಯವೂ ಎರುಮೇಲಿಯಲ್ಲಿ ಶಾಸ್ತಾಕ್ಷೇತ್ರದ ಸವಿೂಪದಲ್ಲಿ ಒಂದು ಮಸೀದಿಯೂ ವಾವರು ಸ್ವಾಮಿಯ ಹೆಸರಿನಿಂದ ಪ್ರಸಿದ್ಧವಾಗಿವೆ. ವಾವರು ಸ್ವಾಮಿಯ ಅಯ್ಯಪ್ಪ ಭಕ್ತಿ ಹಾಗೂ ಎರುಮೇಲಿಯಲ್ಲಿನ ಮಸೀದಿ ಇವೆರಡೂ ಶಬರಿಮಲೆ ತೀರ್ಥಯಾತ್ರಿಕರಿಗೆ ಕೇರಳದ ಮತೀಯ ಸಾಮರಸ್ಯವನ್ನು ಎತ್ತಿ ತೋರಿಸುತ್ತವೆ. ವಾವರು ಸ್ವಾಮಿಯ ಭಕ್ತಿಯ ಮೂಲಕ ಇಸ್ಲಾಂ, ಹಿಂದು, ಕ್ರೈಸ್ತ ಮತಾನುಯಾಯಿಗಳನ್ನು ಸಮಾನತೆಯ ಭಾವದಿಂದ ಕಾಣುವ ಮತ್ತು ಎಲ್ಲಾ ವಿಧವಾದ ಮತೀಯ ನಂಬಿಕೆಗಳನ್ನು ಗೌರವಿಸುವ ರೀತಿಯನ್ನು ಅಯ್ಯಪ್ಪ ಭಕ್ತಿಯು ಪ್ರತಿಪಾದಿಸುತ್ತದೆ.

ಮಾಳಿಕಪುರತ್ತಮ್ಮ
ಶಬರಿಮಲೆಯ ಉಪದೇವತೆಗಳಲ್ಲಿ ಬಹುಮುಖ್ಯವಾದ ದೇವತೆ ಮಾಳಿಕಪುರತ್ತಮ್ಮ. ಈ ದೇವತೆಗೆ ಸಂಬಂಧಿಸಿದಂತೆ ಎರಡು ನಂಬಿಕೆಗಳು ಪ್ರಚಲಿತವಾಗಿವೆ. ಒಂದು, ಮಹಿಷಿಯ ರೂಪದಲ್ಲಿ ಅಯ್ಯಪ್ಪನೊಡನೆ ಹೋರಾಡಲು ಆಗಮಿಸಿದ ರಾಕ್ಷಸಿಯು ಯುದ್ಧದಲ್ಲಿ ಸೋತು ಹೋದಾಗ  ಒಬ್ಬ ಸುಂದರಿಯಾದ ಸ್ತ್ರೀಯಾಗಿ ಬದಲಾವಣೆಗೊಂಡಳು. ಆ ಸುಂದರಿ ಅಯ್ಯಪ್ಪನ ಸನಿಹದಲ್ಲೇ ಇರಲು ಆಸೆಪಟ್ಟಳು. ಮತ್ತೊಂದು ನಂಬಿಕೆಯಂತೆ ಅಯ್ಯಪ್ಪನ ಗುರುಪುತ್ರಿಯು ಸನ್ಯಾಸಿನಿಯಾಗಿ ಪರಿವರ್ತನೆ ಹೊಂದಿ ಅಯ್ಯಪ್ಪನೊಂದಿಗೆ ಕುಳಿತುಕೊಳ್ಳಲು ತೀರ್ಮಾನಿಸಿದಳು. ತಾಂತ್ರಿಕ ದೃಷ್ಟಿಕೋನದ ಪ್ರಕಾರ ಯಾತ್ರಿಕರು ಮಾಳಿಕಪುರತ್ತಮ್ಮನನ್ನು ‘ಆದಿಪರಾಶಕ್ತಿ’ಯಾಗಿ ಪೂಜಿಸಬೇಕಾಗಿದೆ. ಅರಸಿನಹುಡಿ, ಕುಂಕುಮ, ಬೆಲ್ಲ, ಜೇನು, ಬಾಳೆಹಣ್ಣು, ಕೆಂಪುರೇಶ್ಮೆ ಎಂಬಿವು ಮಾಳಿಕಪುರತ್ತಮ್ಮನಿಗೆ ಅರ್ಪಿಸಬೇಕಾದ ಪ್ರಧಾನ ವಸ್ತುಗಳು.

ಕರುಪ್ಪುಸ್ವಾಮಿ ಮತ್ತು ಕರುಪ್ಪಾಯಮ್ಮ
ಹದಿನೆಂಟು ಮೆಟ್ಟಲುಗಳ ಬಲಭಾಗದಲ್ಲಿ ಕರುಪ್ಪು ಸ್ವಾಮಿಯ ದೇವಾಲಯವಿದೆ. ಕರುಪ್ಪು ಸ್ವಾಮಿಯ ದೇವಾಲಯದ ಒಳಗಡೆ ಕರುಪ್ಪಾಯಮ್ಮನನ್ನು ಪ್ರತಿಷ್ಠಾಪಿಸಲಾಗಿದೆ. ದಿವ್ಯಶಕ್ತಿ ಸಂಪನ್ನರಾದ ಈ ಇಬ್ಬರು ಕಾಡಿನಿಂದ ಬಂದು ಅಯ್ಯಪ್ಪ ಸ್ವಾಮಿಗೆ ತನ್ನ ದೈವಿಕ ಕಾರ್ಯಗಳನ್ನು ಪೂರ್ತಿಗೊಳಿಸಲು ನೆರವು ನೀಡಿದರು ಎಂದು ನಂಬಲಾಗಿದೆ.

ವಲಿಯ ಕಡುತ್ತ ಸ್ವಾಮಿ
ವಲಿಯ ಕಡುತ್ತ ಸ್ವಾಮಿಯ ಚಿಕ್ಕ ಪ್ರತಿಷ್ಠೆ ಪವಿತ್ರವಾದ ಹದಿನೆಂಟು ಮೆಟ್ಟಿಲುಗಳ ಎಡ ಭಾಗದಲ್ಲಿದೆ. ವಲಯ ಕಡುತ್ತನೂ ಅಯ್ಯಪ್ಪಸ್ವಾಮಿಯ ಸಹಾಯಕನಾಗಿದ್ದನು.

ಮೇಲ್ಗಣಪತಿ
ಸನ್ನಿಧಾನದ ಪ್ರಧಾನ ಗರ್ಭಗುಡಿಯ (ಶ್ರೀಕೋವಿಲ್) ಸವಿೂಪದಲ್ಲಿ ಮೇಲ್ಗಣಪತಿಯ ಪ್ರತಿಷ್ಠೆ ಇದೆ. ಭಕ್ತರು ತುಪ್ಪ ತುಂಬಿಸಿ ತಂದ ತೆಂಗಿನ ಕಾಯಿಯ (ನೆಯ್ ತೇಙ್ಙ) ಒಡೆದ ತುಂಡುಗಳನ್ನು ಗಣಪತಿಗಾಗಿ ಅಗ್ನಿಕುಂಡದಲ್ಲಿ ಸಮರ್ಪಿಸುತ್ತಾರೆ. ಗಣಪತಿ ಹೋಮ ಇಲ್ಲಿಯ ಪ್ರಧಾನವಾದ ಸೇವೆಯಾಗಿದೆ.