ಅರನ್ಮುಳ ಪಾರ್ಥ ಸಾರಥಿ ದೇವಸ್ಥಾನ

ಪಟ್ಟಣಂತಿಟ್ಟ ಜಿಲ್ಲೆಯ ಆರನ್ಮುಳ ಗ್ರಾಮದಲ್ಲಿರುವ ಪಾರ್ಥಸಾರಥಿ ದೇವಾಲಯವು ಭಕ್ತ ಕವಿಗಳಾದ ಹನ್ನೆರಡು ಮಂದಿ ಆಳ್ವಾರರಿಂದ ಕೀರ್ತಿಸಲ್ಪಟ್ಟ ದಿವ್ಯ ದೇಶಗಳಾದ 108 ವಿಷ್ಣು ಕ್ಷೇತ್ರಗಳಲ್ಲಿ ಒಂದಾಗಿದೆ. ಕೇರಳೀಯ ವಾಸ್ತು ಶೈಲಿಯಲ್ಲಿ ನಿರ್ಮಿತವಾದ ಈ ಕ್ಷೇತ್ರವು ಕ್ರಿ.ಶ. 6-9ನೇ ಶತಮಾನಗಳಲ್ಲಿ ಜೀವಿಸಿದ್ದ ಆಳ್‌ವಾರ್ ಸನ್ಯಾಸಿಗಳ ತಮಿಳು ವೇದವೆನಿಸಿದ ದಿವ್ಯ ಪ್ರಬಂಧದಲ್ಲಿ ಸ್ತುತಿಸಲ್ಪಟ್ಟಿದೆ. ಇದು ವಿಷ್ಣುವಿನ ಅವತಾರವಾದ ಕೃಷ್ಣನಿಗೆ ಸಮರ್ಪಿತವಾದ 108 ದಿವ್ಯದೇಶಗಳಲ್ಲಿ ಒಂದಾಗಿದೆ. ಮಹಾಭಾತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿದ್ದ ಕೃಷ್ಣನಿಗೆ ಪಾರ್ಥಸಾರಥಿ ಎಂಬ ಹೆಸರು ಬಂತು. ಕೇರಳದ ಮುಖ್ಯವಾದ ಕೃಷ್ಣ ಕ್ಷೇತ್ರಗಳಲ್ಲಿ ಈ ಕ್ಷೇತ್ರವೂ ಒಂದಾಗಿದೆ. ಗುರುವಾಯೂರು, ತೃಚ್ಚಂಬರಂ, ತಿರುವಾರ್ಪ್, ಅಂಬಲಪ್ಪುಯ ಶ್ರೀಕೃಷ್ಣ ಎಂಬೀ ಕ್ಷೇತ್ರಗಳು ಮಿಕ್ಕವು. ಮಹಾಭಾರತ ಕಥೆಯೊಂದಿಗೆ ಸಂಬಂಧ ಹೊಂದಿದ ಚೆಂಗನ್ನೂರ್ ಪ್ರದೇಶದ ಐದು ಪ್ರಾಚೀನ ಕ್ಷೇತ್ರಗಳಲ್ಲಿ ಆರನ್ಮುಳ ಪಾರ್ಥಸಾರಥಿ ಕ್ಷೇತ್ರವೂ ಒಂದು. ಐದು ಜನ ಪಾಂಡವರೂ ಇಲ್ಲಿ ಒಂದೊಂದು ದೇವಾಲಯವನ್ನು ನಿರ್ಮಿಸಿದರೆಂಬುಂದು ಐತಿಹ್ಯ. ಯುಧಿಷ್ಠಿರನು ತೃಚ್ಚಿತ್ತಾಟ್ಟ್ ಮಹಾವಿಷ್ಣು ಕ್ಷೇತ್ರವನ್ನೂ, ಭೀಮನು ಪುಲಿಯೂರ್ ಮಹಾವಿಷ್ಣು ಕ್ಷೇತ್ರವನ್ನೂ, ಅರ್ಜುನನು ಆರನ್ಮುಳ ಕ್ಷೇತ್ರವನ್ನೂ, ನಕುಲನು ತಿರುನ್‌ವಂಡೂರು ಮಹಾವಿಷ್ಣು ಕ್ಷೇತ್ರವನ್ನೂ, ಸಹದೇವನು ತೃಕ್ಕಡಿತ್ತಾನಂ ಮಹಾವಿಷ್ಣು ಕ್ಷೇತ್ರವನ್ನೂ ನಿರ್ಮಿಸಿದರಂತೆ. ಪ್ರತಿವರ್ಷ ಪಂದಳದಿಂದ ಅಯ್ಯಪ್ಪನ ತಿರುವಾಭರಣವನ್ನು ಶಬರಿಮಲೆಗೆ ಕೊಂಡುಹೋಗುವ ಮೆರವಣಿಗೆಯ ತಂಡದವರು ತಂಗುವ ವಿಶ್ರಾಂತಿ ಕೇಂದ್ರಗಳಲ್ಲಿ ಆರಮ್ಮಳ ದೇವಾಲಯವೂ ಒಂದು. ಅಲ್ಲದೆ, ತಿರುವಾಂಕೂರು ರಾಜನು ಅಯ್ಯಪ್ಪನಿಗೆ ಸಮರ್ಪಿಸಿದ ಚಿನ್ನದ ಉಡುಪನ್ನು ಕಾಪಿಡುವ ಸ್ಥಳ ಈ ಕ್ಷೇತ್ರವೇ ಆಗಿರುತ್ತದೆ. ದಶಂಬರ ತಿಂಗಳ ಕೊನೆಯಲ್ಲಿರುವ ಮಂಡಲದ ಸಮಯದಲ್ಲಿ ಇವುಗಳನ್ನು ಅಲ್ಲಿಗೆ ಒಯ್ಯಲಾಗುತ್ತದೆ. ಈ ಕ್ಷೇತ್ರದ ಹೊರ ಪ್ರಾಕಾರದಲ್ಲಿ ಪ್ರವೇಶದ ಸಲುವಾಗಿ ನಾಲ್ಕು ಗೋಪುರಗಳಿವೆ. ಪೂರ್ವದ ಪ್ರವೇಶ ದ್ವಾರದಲ್ಲಿ ಹದಿನೆಂಟು ಮೆಟ್ಟಿಲುಗಳಿವೆ. ಉತ್ತರ ದಿಕ್ಕಿನ ಗೋಪುರದಲ್ಲಿರುವ 54 ಮೆಟ್ಟಿಲುಗಳು ಪಂಪಾ ನದಿಯತ್ತ ಸಾಗುತ್ತವೆ. ಕ್ಷೇತ್ರದ ಗೋಡೆಗಳಲ್ಲಿ 18ನೇ ಶತಮಾನಕ್ಕೆ ಮೊದಲು ಬಿಡಿಸಿದ ಚಿತ್ರಗಳಿವೆ. ಬೆಳಗ್ಗೆ ನಾಲ್ಕರಿಂದ ಹನ್ನೊಂದು  ಗಂಟೆವರೆಗೆ ಮತ್ತು ಸಾಯಂಕಾಲ ಐದರಿಂದ ಎಂಟು ಗಂಟೆ ವರೆಗೆ ದೇವಾಲಯವು ತೆರೆದಿರುತ್ತದೆ. ಇದು ಕೇರಳ ಸರಕಾರದ ನಿಯಂತ್ರಣದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ ಆಡಳಿತಕ್ಕೆ ಒಳಪಟ್ಟುದಾಗಿದೆ.

 

ಸಂಪರ್ಕ

 

Connect us

ಸಹಾಯವಾಣಿ

uhh

Updated Schedule